ಆಹಾರದಲ್ಲಿ ಬದಲಾವಣೆ ಆದರೆ ಮಲಬದ್ಧತೆ ಕಡಿಮೆ ಆಗ್ಲಿಲ್ವಾ?

ಮಲಬದ್ಧತೆ, ಅಸಿಡಿಟಿ ಹಾಗೂ ಗ್ಯಾಸ್ ಸಮಸ್ಯೆ ಶುರುವಾದ್ರೆ ಅದರಿಂದ ಮುಕ್ತಿ ಪಡೆಯೋದು ತುಂಬಾನೇ ದೊಡ್ಡ ಕೆಲಸ. ಆರಂಭದಲ್ಲಿ ಸಣ್ಣದಾಗಿ ಶುರುವಾಗುವ ರೋಗ ದಿನ ಕಳೆದಂತೆ ಜೀವ ಹಿಂಡಲು ಶುರು ಮಾಡುತ್ತದೆ. ಅದಕ್ಕೆ ಆರಂಭದಲ್ಲಿಯೇ ಪರಿಹಾರ ಕಂಡುಕೊಳ್ಳುವುದು ಮುಖ್ಯ. 

ವೈದ್ಯರಿಗಿಂತ ಆಹಾರ ಹಾಗೂ ಜೀವನ ಶೈಲಿ ಬದಲಾವಣೆ ಮೂಲಕ ನಾವು ಈ ಸಮಸ್ಯೆಗಳನ್ನು ಕಡಿಮೆ ಮಾಡಬಹುದು. ನಿತ್ಯವೂ ಮಲಬದ್ಧತೆ, ಅಸಿಡಿಟಿ, ಗ್ಯಾಸ್ ಸಮಸ್ಯೆ ಕಾಡುತ್ತಿದ್ದರೆ ಮೊದಲು ನಾವು ನಮ್ಮ ಆಹಾರ ಕ್ರಮವನ್ನು ಸುಧಾರಿಸಿಕೊಳ್ಳುತ್ತೇವೆ. ಸ್ವಲ್ಪ ಆಹಾರ ಕಡಿಮೆ ತಿನ್ನುತ್ತೇವೆ. ಆದರೆ ಇದರ ನಂತರವೂ ನಿಮಗೆ ಯಾವುದೇ ರೀತಿಯ ಉಪಶಮನ ಕಾಣದೆ ಇದ್ದರೆ ಈಗ ನಿಮ್ಮ ಅಭ್ಯಾಸಗಳ ಬಗ್ಗೆ ಗಮನ ಹರಿಸಬೇಕಾಗುತ್ತದೆ. ಕಳಪೆ ಜೀರ್ಣಕ್ರಿಯೆಯ ಹಿಂದೆ ನಮ್ಮ ಅನೇಕ ಅಭ್ಯಾಸಗಳು ಸಹ ಕಾರಣವಾಗುತ್ತವೆ. ಮಲಬದ್ಧತೆ ಕಾಡಲು ಕಾರಣವಾಗುವ ನಮ್ಮ ಅಭ್ಯಾಸಗಳು ಯಾವುವು ಎಂಬುದನ್ನು ನಾವಿಂದು ನೋಡೋಣ. 

ಮಲಬದ್ಧತೆ , ಗ್ಯಾಸ್ ಗೆ ಕಾರಣವಾಗುವ ಈ ಅಭ್ಯಾಸ:
ಆಹಾರದ ಜೊತೆಗೆ ಮತ್ತು ತಕ್ಷಣ ನೀರು ಸೇವನೆ : ಇದು ಹೆಚ್ಚಿನ ಜನರು ಮಾಡುವ ದೊಡ್ಡ ಮತ್ತು ಸಾಮಾನ್ಯ ತಪ್ಪು. ಊಟದ ಜೊತೆಗೆ ಅಥವಾ ಊಟವಾದ ತಕ್ಷಣ ನೀರು ಕುಡಿಯುವುದರಿಂದ ಹೊಟ್ಟೆ ಉಬ್ಬುವುದು, ಗ್ಯಾಸ್ ಮತ್ತು ಆಮ್ಲೀಯತೆಯ ಸಮಸ್ಯೆಗಳು ಉಂಟಾಗಬಹುದು. ಇದು ಜೀರ್ಣಾಂಗ ವ್ಯವಸ್ಥೆಯನ್ನು ತೊಂದರೆಗೊಳಿಸುತ್ತದೆ. ಇದಲ್ಲದೆ, ಊಟದ ನಂತರ ನೀರು ಕುಡಿಯುವುದರಿಂದ ದೇಹದಲ್ಲಿನ ಸಕ್ಕರೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿರುತ್ತದೆ. ಆಹಾರದಲ್ಲಿರುವ ಪ್ರೋಟೀನ್ ಮತ್ತು ಇತರ ಪೋಷಕಾಂಶಗಳನ್ನು ಹೀರಿಕೊಳ್ಳಲು ದೇಹಕ್ಕೆ ಸಮಯ ಬೇಕಾಗುತ್ತದೆ. ಆಹಾರ ಸೇವನೆ ನಂತ್ರ ಅಥವಾ ಊಟವಾದ ತಕ್ಷಣ ನೀರನ್ನು ಕುಡಿದ್ರೆ ನೀರು ಜೀರ್ಣಕ್ರಿಯೆಯ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಇದ್ರಿಂದ ಜೀರ್ಣಕ್ರಿಯೆ ಕಷ್ಟವಾಗುತ್ತದೆ. ಆಹಾರ ಸೇವನೆ ನಂತರ ಕನಿಷ್ಠ 20-30 ನಿಮಿಷ ಬಿಟ್ಟು ನೀರನ್ನು ಕುಡಿಯಬೇಕು.

ಆತುರಾತುರವಾಗಿ ಆಹಾರ ಸೇವನೆ:
ತರಾತುರಿ ಜೀವನದಲ್ಲಿ ಜನರಿಗೆ ಆಹಾರ ಸೇವನೆ ಮಾಡಲು ಸಮಯವಿರುವುದಿಲ್ಲ. ಇನ್ನು ನಿಧಾನವಾಗಿ ಆಹಾರ ಸೇವನೆ ಅಸಾಧ್ಯ. ಆದ್ರೆ ತರಾತುರಿಯಲ್ಲಿ ಆಹಾರ ಸೇವನೆ ಮಾಡುವುದು ಒಳ್ಳೆಯ ಅಭ್ಯಾಸವಲ್ಲ. ಆಹಾರವನ್ನು ಅಗೆದು ಸೇವನೆ ಮಾಡುವುದು ಸರಿಯಾದ ಜೀರ್ಣಕ್ರಿಯೆಗೆ ಅಗತ್ಯವಾದ ಅಭ್ಯಾಸವಾಗಿದೆ. ಇದು ನಿಮ್ಮ ತೂಕವನ್ನು ನಿಯಂತ್ರಣದಲ್ಲಿಡುತ್ತದೆ. ಆಹಾರವನ್ನು ನಿಧಾನವಾಗಿ ಅಗಿಯುವುದರಿಂದ, ದೇಹವು ಜೀರ್ಣಕ್ರಿಯೆಗೆ ಅಗತ್ಯವಾದ ಹಾರ್ಮೋನುಗಳನ್ನು ಬಿಡುಗಡೆ ಮಾಡಲು ಸಮಯವನ್ನು ಪಡೆಯುತ್ತದೆ. ಇದಲ್ಲದೇ ಹಲವು ಬಾರಿ ಬಾಯಿ ಓಡಿಸುವುದರಿಂದ ಕಡಿಮೆ ಆಹಾರದಲ್ಲಿಯೂ ಹೊಟ್ಟೆ ತುಂಬುತ್ತದೆ. ಇದ್ರಿಂದ ಅತಿಯಾಗಿ ತಿನ್ನುವುದನ್ನು ತಪ್ಪಿಸಬಹುದು.  

ಊಟ ಮಾಡುವಾಗ ಮಾತು ಹಾಗೂ ಟಿವಿ ವೀಕ್ಷಣೆ:
ಮಧ್ಯಾಹ್ನದ ಊಟವಾಗಲಿ, ರಾತ್ರಿಯ ಊಟವಾಗಲಿ ಕುಟುಂಬದವರ ಜೊತೆಯಾಗಲಿ ಅಥವಾ ಒಂಟಿಯಾಗಿರಲಿ ಊಟ ಮಾಡುವಾಗ ಮಾತನಾಡುವುದು ಅಥವಾ ಟಿವಿ, ಮೊಬೈಲ್ನಲ್ಲಿ ಇರುವ ಅಭ್ಯಾಸವನ್ನು ಸಂಪೂರ್ಣವಾಗಿ ತ್ಯಜಿಸಬೇಕು. ತಿನ್ನುವಾಗ ಮಾತನಾಡಿದ್ರೆ ಆಹಾರದ ಜೊತೆಗೆ ಗಾಳಿಯು ನಮ್ಮ ಹೊಟ್ಟೆಗೆ ಹೋಗುತ್ತದೆ. ಇದರಿಂದಾಗಿ ಜೀರ್ಣಕ್ರಿಯೆಯ ಪ್ರಕ್ರಿಯೆಯು ತೊಂದರೆಗೊಳಗಾಗುತ್ತದೆ. ಟಿವಿ ನೋಡ್ತಾ ಆಹಾರ ಸೇವನೆ ಮಾಡಿದ್ರೆ ಎಷ್ಟು ಆಹಾರ ಸೇವನೆ ಮಾಡಿದ್ದೇವೆ ಎಂಬುದು ಗೊತ್ತಾಗುವುದಿಲ್ಲ. ಅಗತ್ಯಕ್ಕಿಂತ ಹೆಚ್ಚು ಆಹಾರ ಸೇವನೆ ಮಾಡುತ್ತೇವೆ. ಇದು ಕೂಡ ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ.